ತೀರ್ಥಂಕರರು
ಜೀವನ್ಮುಕ್ತಾವಸ್ಥೆಯಲ್ಲಿರುವಂಥ, ಜೈನ ಧರ್ಮದ ಬೋಧಕರು, ಅರಹಂತಾವಸ್ಥೆಯಲ್ಲಿರುವ ಇವರಿಗೆ ಇದೇ ಕೊನೆಯ ಭವವಾಗಿರುತ್ತದೆ. ಮುಂದೆ ಇವರಿಗೆ ಪುನರ್ ಜನ್ಮವಿಲ್ಲ. ಇವರ ಮುಂದಿನ ಅವಸ್ಥೆಯೇ ಸಿದ್ಧಾವಸ್ಥೆ. ಲೋಕದಲ್ಲಿ ಹಲವು ಜೀವಿಗಳು ಸಿದ್ಧಾವಸ್ಥೆಯನ್ನು ಹೊಂದಬಹುದು ; ಮುಕ್ತಾತ್ಮರೆನಿಸಬಹುದು. ಆದರೆ ತೀರ್ಥಂಕರರು ಮಾತ್ರ ಇಪ್ಪತ್ನಾಲ್ಕು ಜನ. ಇವರು ಹದಿನೆಂಟು ದೋಶರಹಿತರೂ ಅನಂತ ಚತುಷ್ಟಯಧಾರಿಗಳೂ ಸರ್ವಜ್ಞರೂ ಆಗಿರುತ್ತಾರೆ. ಇವರಿಗೆ ಗರ್ಭಾವತರಣ, ಜನ್ಮಾಭಿಷೇಕ, ದೀಕ್ಷಾ ಕಲ್ಯಾಣ, ಕೇವಲಜ್ಞಾನ ಕಲ್ಯಾಣ, ನಿರ್ವಾಣ ಕಲ್ಯಾಣಗಳೆಂದು ಪಂಚ ಕಲ್ಯಾಣಗಳು ಉಂಟಾಗುತ್ತವೆ. ತೀರ್ಥಂಕರರಾಗುವ ಆತ್ಮರುಗಳು ಸ್ವರ್ಗದಿಂದ ತಮ್ಮ ತಾಯಂದಿರ ಗರ್ಭದಲ್ಲಿ ಅವತರಿಸಿರುತ್ತಾರೆ. ಇವರು ಜನಿಸಿದ ಕೂಡಲೆ ಇಂದ್ರ ಬಂದು ಪೂಜೆ ಸಲ್ಲಿಸುತ್ತಾನೆ. ಮುಂದೆ ದೀಕ್ಷೆ ಪಡೆದು ಇವರು ಉಗ್ರ ತಪಸ್ಸನ್ನು ಆಚರಿಸುತ್ತಾರೆ, ಕೇವಲ ಜ್ಞಾನವನ್ನು ಪಡೆಯುತ್ತಾರೆ. ಆಗ ದೇವೇಂದ್ರ ಬಂದು ಸಮವಸರಣ ಎಂಬ ಧರ್ಮಸಭೆಯೊಂದನ್ನು ರಚಿಸುತ್ತಾನೆ. ಆಮೇಲೆ ತೀರ್ಥಂಕರರು ಧರ್ಮೋಪದೇಶ ಮಾಡುವರು. ಆ ಉಪದೇಶದ ವಿವರಣೆಯನ್ನು ಮಾಡುವವರೇ ಗಣಧರರು. ತೀರ್ಥಂಕರರು ಧರ್ಮಪ್ರವರ್ತಕರು. ಇವರಿಗೆ ಪವಿತ್ರ ದೇಹವಿರುವುದು. ಅದು ಸಪ್ತಧಾತು ರಹಿತವಾದುದು, ಅತ್ಯುಜ್ವಲವಾದುದು, ಕೇವಲ ಗುಣಪುಂಜವಾದುದು. ಅದನ್ನು ಆಚಾರ್ಯರು ವಿಮಲತರ ಗುಣ ಸಮೃದ್ಧಂ ಸಿದ್ಧಂ-ಎಂದು ಹೇಳಿದ್ದಾರೆ. ಇಂಥ ತೀರ್ಥಂಕರರು ಭೂತ, ವರ್ತಮಾನ ಭವಿಷ್ಯತ್ತುಗಳಲ್ಲಿ ಇಪ್ಪತ್ನಾಲ್ಕು ಸಂಖ್ಯೆಯಲ್ಲಿ ಜನಿಸುತ್ತಾರೆ. ಈ ವರ್ತಮಾನ ಕಾಲದಲ್ಲಿ ಋಷಭ (ಆದಿನಾಥ), ಅಜಿತ, ಸಂಭವ, ಅಭಿನಂದನ, ಸುಮತಿ, ಪದ್ಮಪ್ರಭ, ಸುಪಾಶ್ರ್ವ, ಚಂದ್ರಪ್ರಭ, ಪುಷ್ಪದಂತ (ಸುವಿಧಿನಾಥ), ಶೀತಲ, ಶ್ರೇಯಾಂಸ, ವಾಸುಪೂಜ್ಯ, ವಿಮಲ, ಅನಂತನಾಥ, ಧರ್ಮ, ಶಾಂತಿ, ಕುಂಢು ಅರನಾಥ, ಮಲ್ಲಿನಾಥ (ಶ್ವೇತಾಂಬರರು ಇವರನ್ನು ಸ್ತ್ರೀ ಎಂದು ಪರಿಗಣಿಸುವರು), ಮುನಿಸುವ್ರತ, ನಮಿನಾಥ, ನೇಮಿನಾಥ, ಪಾಶ್ರ್ವನಾಥ, ಮಹಾವೀರ (ವರ್ಧಮಾನ)-ಎಂದು ತೀರ್ಥಂಕರರು ಆಗಿಹೋಗಿದ್ದಾರೆ. ಇವರೆಲ್ಲರೂ ಜಿನರಾಗಿ ಧರ್ಮತೀರ್ಥವನ್ನು ಬೋಧಿಸಿದವರು. ತ್ರಿಷಷ್ಠಿ ಶಲಾಕಾ ಪುರುಷರಲ್ಲಿ ಈ 24 ತೀರ್ಥಂಕರರು ಸೇರ್ಪಡೆಯಾಗಿದ್ದಾರೆ.
(ನೋಡಿ- ಜೈನಧರ್ಮ)						(ಎನ್.ಎ.; ಕೆ.ಎಸ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ